ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಸಂಪುಟದಿಂದ ರೆಡ್ಡಿ ಬ್ರದರ್ಸ್, ಶ್ರೀರಾಮುಲು ಹೊರಗಿಡಿ - ಕಾಂಗ್ರೆಸ್ ನಿಯೋಗ ಆಗ್ರಹ

ಬೆಂಗಳೂರು: ಸಂಪುಟದಿಂದ ರೆಡ್ಡಿ ಬ್ರದರ್ಸ್, ಶ್ರೀರಾಮುಲು ಹೊರಗಿಡಿ - ಕಾಂಗ್ರೆಸ್ ನಿಯೋಗ ಆಗ್ರಹ

Sun, 06 Dec 2009 02:41:00  Office Staff   S.O. News Service
ಬೆಂಗಳೂರು, ಡಿ.೫ :ಅಕ್ರಮ ಗಣಿಗಾರಿಕೆ ಆರೋಪದಿಂದಾಗಿ ಸಿಬಿ‌ಐ ತನಿಖೆ ಎದುರಿಸುತ್ತಿರುವ ಸಚಿವರಾದ ಜನಾರ್ದನ ರೆಡ್ಡಿ, ಕರುಣಾಕರರೆಡ್ಡಿ ಹಾಗೂ ಶ್ರೀರಾಮುಲು ಅವರನ್ನು ಕೂಡಲೇ ಸಂಪುಟದಿಂದ ಕೈಬಿಡಲು  ಸರ್ಕಾರಕ್ಕೆ ತಾಕೀತು ಮಾಡುವಂತೆ ಕಾಂಗ್ರೆಸ್ ನಿಯೋಗ ರಾಜ್ಯಪಾಲ ಎಚ್. ಆರ್.ಭಾರದ್ವಾಜ್‌ರನ್ನು ಆಗ್ರಹಿಸಿದೆ. 
 
ಈ ಬಗ್ಗೆ ಸಿ‌ಎಂ ಯಡಿಯೂರಪ್ಪ ಅವರನ್ನು ಕರೆಸಿ ವಿವರಣೆ ಪಡೆದು ನಂತರ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ರಾಜ್ಯಪಾಲರು ನೀಡಿದ್ದಾರೆ.  ಶನಿವಾರ ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ ಕಾಂಗ್ರೆಸ್ ನಿಯೋಗ, ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಹಾಗೂ ಬಿಬಿ‌ಎಂಪಿಯ ವರ್ಕ್‌ಕೋಡ್ ಹಗರಣವನ್ನು  ಸಿಬಿ‌ಐಗೆ ವಹಿಸುವಂತೆ ಸರ್ಕಾರಕ್ಕೆ ನಿರ್ದೇಶಿಸುವಂತೆ ಆಗ್ರಹಿಸಿತು. ಆಂಧ್ರ ದಲ್ಲಿ ಗಣಿಗಾರಿಕೆ ಪರವಾನಗಿ ಪಡೆದಿರುವ ರೆಡ್ಡಿ ಸೋದರರು ಹಾಗೂ ಶ್ರೀರಾಮುಲು ಒಡೆತನದ ಗಣಿ ಕಂಪನಿಗಳು ರಾಜ್ಯದ ಗಡಿ ಒತ್ತುವರಿ ಮಾಡಿ ಕೋಟ್ಯಂತರ ಮೌಲ್ಯದ ಅದಿರನ್ನು ಲೂಟಿ ಮಾಡುತ್ತಿವೆ. 

ಲೂಟಿ ಮಾಡಲಾದ ರಾಜ್ಯದ ಅದಿರು ಸಂಪತ್ತನ್ನು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿರುವ ತಮ್ಮ ಗಣಿ ಕಂಪನಿಯಲ್ಲಿ ಸಂಗ್ರಹ ಮಾಡುತ್ತಿದೆ.  ಈ ಅಕ್ರಮ ಗಣಿಗಾರಿಕೆ ಬಗ್ಗೆ ಆಂಧ್ರಪ್ರದೇಶ ಸರ್ಕಾರ ಈಗಾಗಲೇ ಸಿಬಿ‌ಐ ತನಿಖೆಗೆ ವಹಿಸಿದೆ. ಆಂಧ್ರದ ಶಿಫಾರಸಿನಂತೆ ಕೇಂದ್ರ ಸರ್ಕಾರ ಸಹ ಸಿಬಿ‌ಐ ತನಿಖೆಗೆ ಆದೇಶಿಸಿದೆ. ವಸ್ತುಸ್ಥಿತಿ ಹೀಗಿರುವಾಗ ಹಾಗೂ ಅಕ್ರಮ ಗಣಿಗಾರಿಕೆಯ ವ್ಯಾಪ್ತಿ ರಾಜ್ಯಕ್ಕೂ ವಿಸ್ತರಿಸಿರುವ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯುವಂತಾಗಲು ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪ ಈ ಸಚಿವತ್ರಯರ ರಾಜೀನಾಮೆ ಪಡೆಯಬೇಕು ಇಲ್ಲವೇ ಸಂಪುಟದಿಂದ ವಜಾ ಮಾಡಬೇಕು. 

ಸಿಬಿ‌ಐ ತನಿಖೆಗೂ ಒತ್ತಾಯ: ಜತೆಗೆ, ರಾಜ್ಯದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆಯೂ ಸಿಬಿ‌ಐ ತನಿಖೆಗೆ ಆದೇಶಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಬಿಪಿ‌ಎಲ್ ಕಾರ್ಡ್ ವಿತರಣೆಯಲ್ಲಿ ಸರ್ಕಾರ ವಿಫಲವಾಗಿದೆ. ಈ ಬಗ್ಗೆಯೂ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು ಎಂದು ಕೋರಲಾಗಿದೆ. 

ರಾಜ್ಯಪಾಲರ ಭರವಸೆ: ರಾಜ್ಯಪಾಲರ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಕಾಂಗ್ರೆಸ್ ಮನವಿಗೆ ರಾಜ್ಯಪಾಲರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಾಂಗ್ರೆಸ್‌ನ ಬೇಡಿಕೆಗಳು ನ್ಯಾಯೋಚಿತವಾಗಿವೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕರೆಸಿ ವಿವರಣೆ ಪಡೆದು, ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಒಂದು ವೇಳೆ ಈ ಅಕ್ರಮ ಗಣಿಗಾರಿಕೆ ಕುರಿತು ಕ್ರಮ ಕೈಗೊಳ್ಳದಿದ್ದರೆ ತಾಲೂಕು ಮಟ್ಟದಲ್ಲಿ ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದರು. 

ಅಕ್ರಮ ಗಣಿಗಾರಿಕೆಯಲ್ಲಿ ಸಿ‌ಎಂ ಸಹ ಭಾಗಿ: ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ಸಚಿವರನ್ನು ಸಂಪುಟದಿಂದ ಕೈ ಬಿಡಲು ಮೀನಮೇಷ ಎಣಿಸುತ್ತಿರುವುದನ್ನು ನೋಡಿದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಸಂಶಯ ಮೂಡುತ್ತಿದೆ ಎಂದರು. ಮುಖ್ಯಮಂತ್ರಿ ಯಡಿಯೂರಪ್ಪ ಗಣಿ ಧಣಿಗಳ ಕಪಿಮುಷ್ಟಿಯಲ್ಲಿ ಸಿಲುಕಿದ್ದಾರೆ. ಗಣಿ ಧಣಿಗಳಾದ ಸಚಿವತ್ರಯರ ವಿರುದ್ಧ ಕ್ರಮ ಕೈಗೊಂಡರೆ ಖುರ್ಚಿ ಅಲುಗಾಡುತ್ತದೆ ಎಂಬ ಭೀತಿಯಲ್ಲಿ ಅವರಿದ್ದಾರೆ. ಇದು ಇಲ್ಲವೆಂದಾದರೇ ಕೂಡಲೇ ಮೂವರು ಸಚಿವರ ವಿರುದ್ಧ ಕ್ರಮ ಕೈಗೊಂಡು ತಮ್ಮ ತಾಕತ್ತು ಪ್ರದರ್ಶಿಸಲಿ ಎಂದು ಸವಾಲು ಹಾಕಿದರು. 
 
ಅಕ್ರಮ ಗಣಿಗಾರಿಕೆ ಮೂಲಕ ರಾಜ್ಯದ ಗಡಿ ಹಾಗೂ ಅರಣ್ಯ ಸಂಪತ್ತಿನ ಲೂಟಿ ನಡೆಸುತ್ತಿರುವ ಗಣಿ ಧಣಿಗಳ ವಿರುದ್ಧ ಕ್ರಮ ಜರುಗಿಸುವ ಸಾಮರ್ಥ್ಯವಿಲ್ಲವೆಂದಾದರೆ ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರ ಬಿಟ್ಟು ತೊಲಗಲಿ ಎಂದು ಹೇಳಿದರು. ನಂತರ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಈ ಹಿಂದೆ ವಕೀಲ ರಶೀದ್ ಕೊಲೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿ‌ಐಗೆ ವಹಿಸಿದ್ದಾಗ ಆರೋಪಿಯಾಗಿದ್ದ ಆಗಿನ ಗೃಹ ಸಚಿವ ಆರ್. ಎಲ್ ಜಾಲಪ್ಪ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. 
 
ಇದು ಅಕ್ರಮ ಗಣಿಗಾರಿಕೆಯ ಆರೋಪಕ್ಕೆ ಒಳಗಾಗಿರುವ ಸಚಿವತ್ರಯರಿಗೂ ಮಾದರಿಯಾಗಬೇಕು ಎಂದು ಹೇಳಿದರು.ನಿಯೋಗದಲ್ಲಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ವಿ.ಎಸ್. ಉಗ್ರಪ್ಪ, ವಿಧಾನಪರಿಷತ್ ಉಪ ನಾಯಕ ಟಿ.ಬಿ. ಜಯಚಂದ್ರ, ಜಿ. ಪರಮೇಶ್ವರ್ ಸೇರಿದಂತೆ ಪ್ರಮುಖ ನಾಯಕರು ಇದ್ದರು.  

ಪ್ರತಿಕ್ರಿಯೆ 
ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಯಾವಾಗ ಏನೇನು ನಡೆಯಿತು ಎಂಬುದನ್ನೆಲ್ಲಾ ಸದನದಲ್ಲಿ ಬಿಚ್ಚಿಡುತ್ತೇನೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಮುಚ್ಚಿಡುವಂತಹದ್ದು ಏನು ಇಲ್ಲ. 
-ಬಿ.ಎಸ್. ಯಡಿಯೂರಪ್ಪ 



ಸೌಜನ್ಯ: ಕನ್ನಡಪ್ರಭ

Share: